ಮೆಕ್ಸಿಕೊ ನಗರದಲ್ಲಿ ಭೂಕಂಪ: 139 ಮಂದಿ ಸಾವು, ಅನೇಕ ಕಟ್ಟಡಗಳು ನಾಶ

  ಮೆಕ್ಸಿಕೊ: ಮೆಕ್ಸಿಕೊ ದೇಶದ ರಾಜಧಾನಿ ಮೆಕ್ಸಿಕೊ ನಗರದ ಕೇಂದ್ರ ಭಾಗದಲ್ಲಿ ನಿನ್ನೆ ಸಂಭವಿಸಿದ ತೀವ್ರ ಭೂಕಂಪದಿಂದ 139 ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.1 ಪರಿಮಾಣದ ಭೂಕಂಪ ಸಂಭವಿಸಿ ಅನೇಕ ಕಟ್ಟಡಗಳು ಕುಸಿದುಹೋಗಿದ್ದು ಸಾವಿರಾರು ಮಂದಿ ನೋವಿನಿಂದ ನರಳುತ್ತಾ ರಸ್ತೆ ಕಡೆಗೆ ಓಡಾಡುತ್ತಿರುವ ದೃಶ್ಯ ಕಂಡುಬಂತು.

 

ಮೆಕ್ಸಿಕೊ ನಗರದ ಜನದಟ್ಟಣೆ ಪ್ರದೇಶದಲ್ಲಿ ಭೂಕಂಪ ಸಂಭವಿಸಿ ಹತ್ತಾರು ಕಟ್ಟಡಗಳು ಬಿದ್ದು ಭಗ್ನಾವಶೇಷಗೊಂಡಿವೆ. ಮೆಕ್ಸಿಕೊ ನಗರವೊಂದರಲ್ಲಿಯೇ 44 ಕಡೆಗಳಲ್ಲಿ ಕಟ್ಟಡಗಳು ಬಿದ್ದಿವೆ ಎಂದು ಮೇಯರ್ ಮಿಗುಯೆಲ್ ಏಂಜಲ್ ಮನ್ಸೆರಾ ತಿಳಿಸಿದ್ದಾರೆ.

 

ಇಂದಿನ ಭೂಕಂಪ 1985ರಲ್ಲಿ ಮೆಕ್ಸಿಕೊ ನಗರದಲ್ಲಿ ಸೆಪ್ಟೆಂಬರ್ 19ರಂದು ರಿಕ್ಟರ್ ಮಾಪಕದಲ್ಲಿ 8.0 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪದ ಕರಾಳ ದಿನವನ್ನು ನೆನಪಿಸಿದೆ. ಅದೇ ತಾರೀಖಿನಂದು 32 ವರ್ಷಗಳ ನಂತರ ಮೆಕ್ಸಿಕೊ ನಗದಲ್ಲಿ ತೀವ್ರ ಪ್ರಮಾಣದಲ್ಲಿ ಭೂಕಂಪ ಉಂಟಾಗಿರುವುದು ದುರಂತ.

 

ಮೆಕ್ಸಿಕೊ ದೇಶದ ದಕ್ಷಿಣ ಭಾಗದಲ್ಲಿ ಎರಡು ವಾರಗಳ ಹಿಂದೆ ಭೂಕಂಪ ಸಂಭವಿಸಿ 90 ಜನ ಮೃತಪಟ್ಟಿದ್ದರು. 

Category: